ಎರ್ಮಾಳು ಶ್ರೀ ನಿಧಿ ಮಹಿಳಾ ಮಂಡಲಕ್ಕೆ ನಲ್ವತ್ತರ ಹರೆಯ
ಅದ್ದೂರಿಯಾಗಿ ನಡೆದ ಕಾರ್ಯಕ್ರಮ
ಪಡುಬಿದ್ರಿ ವರದಿ
ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ನಲ್ವತ್ತನೇ ವಾರ್ಷಿಕೋತ್ಸವ ಜನಾರ್ಧನ ದೇವಸ್ಥಾನದ ಆವರಣದಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಮಹಿಳಾ ಮಂಡಲದ ಗೌರವಾಧ್ಯಕ್ಷೆ ಶೀಲಾ ಕೆ ಶೆಟ್ಟಿ ವಹಿಸಿದ್ದರು.
ಈ ಸಂದರ್ಭ ಡಾ. ಸ್ಪೂರ್ತಿ ಶೆಟ್ಟಿ , ಸುಲತ ಕಾಮತ್ ಕಟಪಾಡಿಯವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಅಶಕ್ತರಿಗೆ ಧನ ಸಹಾಯ, ಆಸು ಪಾಸಿನ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿರಿಸಲಾಯಿತು.
ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದ ಬೆಳಪು ಗ್ರಾಮದ ಅಭಿವೃದ್ಧಿಯ ಹರಿಕಾರ ಡಾ.ಬೆಳಪು ಐಕಳ ಬಾವ ದೇವಿಪ್ರಸಾದ್ ಶೆಟ್ಟಿ, ಸಂಘ ಸಂಸ್ಥೆಗಳ ಹುಟ್ಟು ಮುಖ್ಯವಲ್ಲ, ಅದು ನಡೆದು ಬಂದ ದಾರಿ, ಸಮಾಜಕ್ಕೆ ನೀಡಿದ ಕೊಡುಗೆ, ನಿರಂತರ ಚಟುವಟಿಕೆ ಇವೆಲ್ಲವೂ ಅತೀ ಮುಖ್ಯವಾಗಿದೆ, ಹುಟ್ಟಿದಷ್ಟೇ ವೇಗವಾಗಿ ತೆರೆಮರೆಗೆ ಸರಿದ ಸಂಸ್ಥೆಗಳು ಅದೆಷ್ಟೋ ನಮ್ಮ ಕಣ್ಣ ಮುಂದಿದೆ. ಆದರೆ ಶ್ರೀನಿಧಿ ಮಹಿಳಾ ಮಂಡಳಿ ಸಮಾನ ಮನಸ್ಕ ಸಂಸ್ಥೆಯಾಗಿದ್ದು, ಇತರೆ ಸಂಘ- ಸಂಸ್ಥೆಗಳಿಗೆ ಮಾದರಿ ಎಂಬಂತೆ ಸಮಾಜದ ಬಲುದೊಡ್ಡ ಆಸ್ತಿಯಾಗಿ ಬೆಳೆಯುತ್ತಿದೆ, ನಿಂತ ನೀರಾಗದೆ ಹರಿಯುವ ನೀರಾಗಿ ಲವಲವಿಕೆಯಿಂದ ಮುಂದೋಗುತ್ತಿರುವ ಸಂಸ್ಥೆ ನೂರನೇ ಸಂಭ್ರಮಾಚರಣೆ ಮಾಡುವಂತ್ತಾಗಲೆಂದು ಆರೈಸಿದರು.
ಮುಖ್ಯ ಅತಿಥಿ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ದೇವಳದ ಅನುವಂಶೀಯ ಮೊಸ್ತೇಸರ ಅಶೋಕ್ ರಾಜ್ ಬೀಡು, ಡಾ. ಸ್ಪೂರ್ತಿ ಪಿ. ಶೆಟ್ಟಿ, ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.
ಎರ್ಮಾಳು ಶ್ರೀನಿಧಿ ಮಹಿಳಾ ಮಂಡಲದ ಅಧ್ಯಕ್ಷೆ ರೇಖಾ ಶೆಟ್ಟಿ ಸ್ವಾಗತಿಸಿದರು.
ವಾರ್ಷಿಕ ವರದಿಯನ್ನು ಅಮ್ಮಣಿ ಕುಂದರ್ ವಾಚಿಸಿದರು. ಮಾಜಿ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ ನಿರೂಪಿಸಿದರು. ಅಮೃತ ಕಲಾ ಶೆಟ್ಟಿ ವಂದಿಸಿದರು.