ಸಂವಿಧಾನ ಅಪಾಯದಲ್ಲಿದೆ ಜಾಸ್ತಿದಿನ ಉಳಿಯೊದಿಲ್ಲ: ನಿಕೇತ್ ರಾಜ್ ಮೌರ್ಯ
ಕಾಪು ವರದಿ
ಸಂವಿಧಾನ ಅಪಾಯದಲ್ಲಿದೆ ಅದು ಹೆಚ್ಚು ದಿನ ಉಳಿಯೋದಿಲ್ಲ, ಮಂದಿರ, ಮಸೀದಿ, ಚರ್ಚ್ ಗಳಿಗೆ ಅಪಾಯ ಇದೆ ಎಂದು ತಿಳಿದರೆ ಮಚ್ಚು ಹಿಡಿದು ಅದರ ಕಾವಲಲಿಗೆ ನಿಲ್ಲುವ ನಾವು ನಮ್ಮ ಸವಿಧಾನಕ್ಕೆ ಅಪಾಯವಿದೆ ಎಂದರೆ ಅದರ ಬಗ್ಗೆ ಯಾರೂ ತಲೆನೇ ಕೆಡಿಸಿಕೊಳ್ಳುವುದಿಲ್ಲ ಎಂಬುದಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕ ನಿಕೇತ್ ರಾಜ್ ಮೌರ್ಯ ವಿಷಾದ ವ್ಯಕ್ತಪಡಿಸಿದ್ದಾರೆ.
ಅವರು ಕಾಪು ಪೇಟೆಯಲ್ಲಿ ರಕ್ಷಣಾಪುರ ಜವನೆರ್ ಆಯೋಜಿಸಿದ “ಸಂವಿಧಾನ” ಉಳಿಸಿ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂವಿಧಾನ ಇಲ್ಲವಾಗಿದ್ದರೆ ಮಂದಿರ ಮಸೀದಿ ಇದ್ದರೂ ಅದು ನಮ್ಮದಾಗಿ ಇರುತ್ತಿರಲಿಲ್ಲ, ಇಂದಿಗೂ ಅದು ನಮ್ಮದಾಗಿದ್ದರೆ ಅದಕ್ಕೆ ಕಾರಣ ಬಾಬಾ ಸಹೇಬ್ ಡಾ.ಅಂಬೇಡ್ಕರ್ ಬರೆದ ಮನುಷ್ಯ ಸಂವಿಧಾನದಿಂದಾಗಿ, ಡಿಸಿ, ಎಸ್ಪಿ, ಯಾವುದೇ ಮಟ್ಟದ ರಾಜಕಾರಣಿಗಳನ್ನು ನಾವು ನಮ್ಮ ನಾಯಕರು ಎಂದು ಕೊಂಡಿದ್ದೇವೆ, ಆದರೆ ನಮ್ಮ ಸಂವಿಧಾನದ ಅಡಿಯಲ್ಲಿ ಇವರು ಯಾರೂ ನಮ್ಮ ನಾಯಕರಲ್ಲ ನಮ್ಮ ಸೇವಕರು ಎಂದರು.
ಆರಂಭದಲ್ಲಿ ಕಾಪು ಜನಾರ್ಧನ ದೇವಸ್ಥಾನದಿಂದ ಮೆರವಣಿಗೆ ಮೂಲಕ ಕಾಪು ಪೇಟೆಗೆ ಆಗಮಿಸಲಾಯಿತು. ಸುಮಾರು ನಾಲ್ಕು ಸಾವಿರ ಮಂದಿ ಸೇರಿದ ಬೃಹತ್ ಸಭೆಯಲ್ಲಿ ಮಹಿಳೆಯರಿಗೆ ಪೂರ್ವ ನಿಯೋಜನೆಯಂತೆ ಸೀರೆ ಹಂಚಲಾಯಿತು.
ಈ ಸಂದರ್ಭ
ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಹೊಸ ಮಾರಿಗುಡಿ ದೇವಳದ ಪ್ರಮುಖ ಅರ್ಚಕ ಶ್ರೀನಿವಾಸ್ ತಂತ್ರಿ, ದೇವಳದ ಜೀರ್ಣೋದ್ಧಾರ ಸಮಿತಿ ಪ್ರಮುಖ ಕೆ. ವಾಸುದೇವ ಶೆಟ್ಟಿ, ಉದ್ಯಮಿ ಮನೋಹರ್ ಶೆಟ್ಟಿ, ದಲಿತ ಮುಖಂಡ ಸುಂದರ ಮಾಸ್ತರ್, ಕಾಪು ಬ್ಲಾಕ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಪ್ರಮುಖರಾದ ವಿಶ್ವಾಸ್ ಅಮೀನ್, ದಿವಾಕರ್ ಶೆಟ್ಟಿ ಕಾಪು, ದಿನಕರ ಹೇರೂರು, ಎಂ.ಎ.ಗಪೂರ್, ಶಿವಾಜಿ ಸುವರ್ಣ, ನವೀನ್ ಚಂದ್ರ ಶೆಟ್ಟಿ, ನವೀನ್ ಎನ್. ಶೆಟ್ಟಿ, ಸರ್ಫೂದ್ಧೀನ್ ಶೇಖ್,ದಲಿತ ಮುಖಂಡ ಶೇಖರ್ ಹೆಜಮಾಡಿ, ಸುಧೀರ್ ಕುಮಾರ್ ಮುರೋಳಿ, ಮುಸ್ಲಿಂ ಧರ್ಮಗುರು ಇರ್ಶಾದ್ ಧಾರ್ಮಿ , ವಿಲಿಯಂ ಮಾರ್ಟೀಸ್, ಅಶೋಕ್ ಕುಮಾರ್ ಕೊಡವೂರು ಮುಂತಾವರಿದ್ದರು.
ಕಾರ್ಯಕ್ರಮದುದ್ದಕ್ಕೂ ಸುಡು ಮದ್ದಿನ ಸದ್ದು!
ಸಂವಿಧಾನ ಉಳಿಸಿ ಕಾರ್ಯಕ್ರಮದುದ್ದಕ್ಕೂ ಸುಡುಮದ್ದಿನ ಸದ್ದು ಕೇಳಿ ಬರುತ್ತಿದ್ದು, ಆದರೆ ಕಾರ್ಯಕರ್ತರೊಳಗೆ ಈ ಬಗ್ಗೆ ಆಕ್ಷೇಪದ ಮಾತುಗಳು ಕೇಳಿ ಬರುತ್ತಿತ್ತು, ಗಣ್ಯರು ಭಾಷಣ ಮಾಡುತ್ತಿರುವ ಮಧ್ಯೆ ಇದೆಲ್ಲಾ ಬೇಕಿತ್ತಾ ಎಂಬುದು! ಆದರೆ ಅಗತ್ಯವಾಗಿಯೂ ಬೇಕಿತ್ತು ಎಂಬುದು ಸುಡುಮದ್ದು ಸುಡುವ ಮೂಲ ಕಾರಣ ತಿಳಿದವರು. ಕಾರಣ ಇಷ್ಟೇ ಕಾರ್ಯಕ್ರಮದ ಚಪ್ಪರ ಹಾಕಲಾದ ಪ್ರದೇಶದಲ್ಲಿದ್ದ ಮರದಲ್ಲಿ ವಾಸವಾಗಿರುವ ನೂರಾರು ಬಾವಲಿಗಳು ನಿರತರ ಮಲ ವಿಸರ್ಜನೆ ಮಾಡುತ್ತಿದ್ದು, ಅದು ಸಭಿಕರ ತಲೆಯನ್ನು ಕೊಳಕು ಮಾಡುವುದನ್ನು ತಪ್ಪಿಸಲು ಈ ಸುಡುಮದ್ದು ಸುಡುವುದರ ಮೂಲಕ ಅವುಗಳನ್ನು ಪದೇ ಪದೇ ಓಡಿಸುವ ತಂತ್ರ ಎಂಬುದು ತಡವಾಗಿ ಗೋಚರಕ್ಕೆ ಬಂದಿದೆ.