ಕೃಷಿ ಭೂಮಿ ನಾಶ ಪಡಿಸಿ ಮಾಡುವ ಯಾವ ಅಭಿವೃದ್ಧಿಯೂ ನಮಗೆ ಬೇಕಿಲ್ಲ: ಮುನಿಯಾಲು
ಪಡುಬಿದ್ರಿ ವರದಿ
ಜನವಿರೋಧಿ ಕಂಪನಿ ಅದಾನಿ ಯುಪಿಸಿಎಲ್ ನಿಂದ ಕೇರಳಕ್ಕೆ 400,ಕೆವಿ ವಿದ್ಯುತ್ ಸರಬರಾಜು ನಡೆಸಲು ಇನ್ನಾ ಗ್ರಾಮದ ಬಹುತೇಕ ಕೃಷಿ ಭೂಮಿಯನ್ನು ಬಲಿ ಪಡೆಯಲು ಹುನ್ನಾರ ನಡೆಸುತ್ತಿರುವ ಖಾಸಗಿ ಗುತ್ತಿಗೆ ಕಂಪನಿಯ ಪ್ರಯತ್ನ ಯಾವುದೇ ಕಾರಣಕ್ಕೆ ಈಡೇರಲು ಅವಕಾಶ ನೀಡುವುದಿಲ್ಲ ಎಂಬುದಾಗಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಅವರು ಟವರ್ ವಿರೋಧಿ ಸಮಿತಿ ನೇತೃತ್ವದಲ್ಲಿ ಇನ್ನಾ ಗ್ರಾಮದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ನಡೆಯುತ್ತಿರುವ ಸ್ಥಳದಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಈ ಅವೈಜ್ಞಾನಿಕ ಕಾಮಗಾರಿಯ ಬದಲಾಗಿ ವೈಜ್ಞಾನಿಕ ರೀತಿಯಲ್ಲಿ ಭೂಗತ ಕೇಬಲ್ ಅಳವಡಿಕೆಯನ್ನು ಮಾಡಿದರೆ ಗ್ರಾಮದ ಕೃಷಿ ಭೂಮಿ ಉಳಿಯಲು ಸಾದ್ಯವಿದೆ, ಈ ಹಿಂದೆ ಹಾಸನಕ್ಕೆ ವಿದ್ಯುತ್ ಸರಬರಾಜು ಎಂಬ ನೆಪ ಒಡ್ಡಿ ನಮ್ಮ ಕೃಷಿಭೂಮಿಯನ್ನು ಕಬಳಿಸಿದ್ದಾಗಿದೆ, ಮತ್ತೊಂದು ಕಡೆಯಿಂದ ಪಾದೂರು ಕಚ್ಚಾತೈಲ ಘಟಕದ ಪೈಪ್ ಲೈನ್ ಗೆ ಇನ್ನಷ್ಟು ಕೃಷಿಭೂಮಿಯನ್ನು ಕಳೆದುಕೊಂಡಿರುವುದು ಸುಳ್ಳಲ್ಲ, ಇದೀಗ ಒಂದಿಷ್ಟು ಉಳಿದ ಕೃಷಿಭೂಮಿಯನ್ನು ಟವರ್ ನಿರ್ಮಾಣದ ಹೆಸರಲ್ಲಿ ಕಳೆದುಕೊಳ್ಳಲು ನಾವು ಸಿದ್ಧರಿಲ್ಲ, ಕೃಷಿಭೂಮಿ ಉಳಿವಿಗಾಗಿ ಯಾವುದೇ ಮಟ್ಟದ ಹೋರಾಟಕ್ಕೂ ನಾವು ಸಿದ್ಧ ಎಂದರು.
ಟವರ್ ನಿರ್ಮಾಣ ವಿರೋಧಿ ಸಮಿತಿಯ ಅಧ್ಯಕ್ಷ ಅಮರನಾಥ ಶೆಟ್ಟಿ ಮಾತನಾಡಿ ಟವರ್ ಅಳವಡಿಕೆ ಯೋಜನೆಯು ಗ್ರಾಮದಿಂದ ಒದ್ದೋಡಿಸುವ ತನಕ ವಿರಮಿಸುವುದಿಲ್ಲ, ಅವೈಜ್ಞಾನಿಕ ಕಾಮಾಗಾರಿಯ ಬದಲು ವೈಜ್ಞಾನಿಕ ಕ್ರಮಗಳನ್ನು ಅಳವಡಿಸುವಂತೆ ಕೇಂದ್ರ ಹಾಗೂ ರಾಜ್ಯ ಈ ಅವಳಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದರು.
ಸುದ್ಧಿಗೋಷ್ಠಿಯಲ್ಲಿ ಸ್ಥಳೀಯ ಹೋರಾಟಗಾರರಾದ ಕುಶ ಆರ್.ಮೂಲ್ಯ, ಜಯ ಕೋಟ್ಯಾನ್ ಇನ್ನಾ, ಇನ್ನಾ ದೀಪಕ್ ಕೋಟ್ಯಾನ್, ಅನಿತಾ ಡಿಸೋಜ, ಪ್ರವೀಣ್ .ಜೆ. ಶೆಟ್ಟಿ, ಸುಲೋಚನ ಕೋಟ್ಯಾನ್, ದಿವಾಕರ ಶೆಟ್ಟಿ, ರವಿ ಶೆಟ್ಟಿ ಇನ್ನಾ, ಸುರೇಶ್ ಶೆಟ್ಟಿ ಅಬ್ಬಗ ದಾರಗ, ಕಸ್ತೂರಿ ಆಚಾರ್ಯ, ಸುರೇಶ್ ಮೂಲ್ಯ, ಅಜಿತ್ ಶೆಟ್ಟಿ ಸೂಡ, ಶೇಖ್ ಅಬ್ದುಲ್, ಶೋಭಾ, ಯೋಗೀಶ್ ಇನ್ನಾ, ಸಂತೋಷ್ ದೇವಾಡಿಗ, ಕಿಶೋರ್ ದೀಕ್ಷಿತ್ ದೇವಾಡಿಗ, ಪ್ರದೀಪ್ ಬೇಲಾಡಿ, ಸುದರ್ಶನ್ ಬಂಗೇರ, ಮನೀಶ್ ಪೂಜಾರಿ, ಅನೀಶ್ ಪೂಜಾರಿ, ಪ್ರಶಾಂತ್ ಕುಂದರ್, ಕೇಶವ ಸಾಲಿಯಾನ್ ಸಹಿತ ಗ್ರಾಮಸ್ಥರು ಉಪಸ್ಥಿತರಿದ್ದರು.