ಕಡಿತದ ಮತ್ತಿನಲ್ಲಿ ಇನೋವಾ ಚಾಲನೆ: ಕೇರಳದ ಇಬ್ಬರು ಯುವಕರು ವಶಕ್ಕೆ
ಕಡಿತದ ನಶೆಯಲ್ಲಿ ಕೇರಳ ಮೂಲದ ಯುವಕರಿಬ್ಬರು ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಸರಣಿ ಅಪಘಾತ ನಡೆಸಿ ಅಂತಿಮವಾಗಿ ಪಡುಬಿದ್ರಿ ಪೊಲೀಸರ ಅಥಿತಿಯಾಗಿದ್ದಾರೆ.
ಕೇರಳ ಮೂಲದ ದೀರಜ್ ಹಾಗೂ ಗೌತಮ್ ಎಂಬ ಇಬ್ಬರು ಯುವಕರು ಉಡುಪಿಗೆ ಬಂದು ತಿರುಗಾಟ ನಡೆಸಿ ಕಂಠಪೂರ್ತಿ ಕುಡಿದು ಮರಳಿ ಕೇರಳಕ್ಕೆ ಹೋಗಲು ಮುಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾಂಗಾಳದಲ್ಲಿ ಕಾರೊಂದಕ್ಕೆ ಡಿಕ್ಕಿಯಾಗಿ ನಿಲ್ಲಿಸದೆ ಮುಂದೋಡಿದ್ದು, ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಹೆಜಮಾಡಿ ಟೋಲ್ ಸಿಬ್ಬಂದಿಗಳಿಗೆ ಮಾಹಿತಿ ನೀಡಲಾಯಿತು. ಅಲ್ಲಿಗೆ ಬಂದ ಪೊಲೀಸರು ಟೋಲ್ ಸಿಬ್ಬಂದಿಗಳೊಂದಿಗೆ ಕಾರಿಗಾಗಿ ಕಾಯುತ್ತಿದ್ದಾಗ ಅಲ್ಲಿಗೆ ಬಂದ ಇನೋವಾ ಪೊಲೀಸರನ್ನು ನೋಡಿ ಹಿಂದಿರುಗಿ ಪಡುಬಿದ್ರಿ ಕಡೆಗೆ ಹೊರಟಾಗ ಪೊಲೀಸರು ಅವರನ್ನು ಬೆನ್ನಟ್ಟಿದ್ದು, ಪೊಲೀಸರನ್ನು ನೋಡಿದ ಅವರು ದೇವಸ್ಥಾನದ ಒಳ ರಸ್ತೆಯಾದ ಹಳೆ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ ತಿರುಗಿಸುವ ಬರದಲ್ಲಿ ಜಾಹೀರಾತು ಫಲಕದ ಕಂಬವೊಂದಕ್ಕೆ ಡಿಕ್ಕಿಯಾಗಿ ನಿಂತಿದೆ. ಸ್ಥಳಕ್ಕೆ ಬಂದ ಪೊಲೀಸರು ಕಾರು ಸಹಿತ ಅದರ ಚಾಲಕ ಸಹಿತ ಇನ್ನೋರ್ವನನ್ನು ವಶಕ್ಕೆ ಪಡೆದಿದ್ದು, ಕುಡಿತ ಮತ್ತಿನಲ್ಲಿದ್ದ ಅವರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.